ಭಾಷೆ
ಕನ್ನಡ: ಸಾಹಿತ್ಯಕ ಭಾಷೆ

ಕನ್ನಡವು ಹದಿನೈದು ಶತಮಾನಗಳಿಗಿಂತ ಸಾಕಷ್ಟು ಹಿಂದಿನಿಂದಲೂ ಸಾಹಿತ್ಯಕ ಭಾಷೆಯಾಗಿ ಬಳಕೆಯಲ್ಲಿದೆ. ನಮಗೆ ಲಭ್ಯವಾಗಿರುವ ಲಿಖಿತ ಪುರಾವೆಯೇ ಕ್ರಿ.ಶ. 450ರಷ್ಟು ಹಳೆಯದು.(ಹಲ್ಮಿಡಿ ಶಾಸನ) ಮೊದಲಿನಿಂದಲೂ ಲಿಖಿತ ಮತ್ತು ಮೌಖಿಕ ಸಾಹಿತ್ಯಗಳೆರಡರದ ಸೃಷ್ಟಿಯು ನಡೆದುಬಂದಿರುವುದರಲ್ಲಿ ಯಾವ ಅನುಮಾನವೂ ಇಲ್ಲ. ಡಾ. ಷ.ಶೆಟ್ಟರ್ ಅವರು ತಮ್ಮ 'ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ' (2007) ಎಂಬ ಕೃತಿಯಲ್ಲಿ, ತಮಿಳಿನ ಸುಪ್ರಸಿದ್ಧ ಸಂಗಂ ಸಾಹಿತ್ಯಕ್ಕೆ ಸೇರಿದ ಕೆಲವು ಪದ್ಯಗಳಾದರೂ ಕನ್ನಡದ ಪ್ರಾಚೀನ ರೂಪವೊಂದರಲ್ಲಿ ರಚಿತವಾಗಿರಬಹುದೆಂದು ಅಭಿಪ್ರಾಯ ಪಟ್ಟಿದ್ದಾರೆ. ಈ ಕವಿತೆಗಳನ್ನು ರಚಿಸಲಾದ ಪ್ರದೇಶಗಳು, ಆ ಕಾಲದಲ್ಲಿ ಕನ್ನಡದ ರಾಜವಂಶಗಳ ಆಳ್ವಿಕೆಯಲ್ಲಿ ಇದ್ದವೆಂದು ಅವರು ತೋರಿಸಿಕೊಟ್ಟಿದ್ದಾರೆ. ಸಹಜವಾಗಿಯೇ ಈ ಕನ್ನಡವು ಸಂಸ್ಕೃತ ಪದಗಳಿಂದ ತುಂಬಿರಲಿಲ್ಲ. ಹಾಗೆ ನೋಡಿದರೆ, ಮೊದಲಿನಿಂದಲೂ ಕನ್ನಡ ಶಾಸನಗಳಲ್ಲಿ ಸಂಸ್ಕೃತದ ಬಾಹುಳ್ಯವಿದೆ. ಪ್ರಾಯಶಃ, ಕನ್ನಡವು ತನ್ನ ಬೆಳವಣಿಗೆಯ ಬಹಳ ಹಳೆಯ ಹಂತದಲ್ಲಿ ಸಂಸ್ಕೃತದಿಂದ ಪ್ರಭಾವಿತವಾಗಿರಲಿಲ್ಲ. ಬದಲಾಗಿ, ಅದು ತನ್ನ ಸಂಗಾತಿಗಳಾದ ಇತರ ದ್ರಾವಿಡ ಭಾಷೆಗಳಿಗೆ ನಿಕಟವಾಗಿತ್ತು. ಈ ವಿಷಯವನ್ನು ಕುರಿತಂತೆ ಖಚಿತವಾದ ತೀರ್ಮಾನಗಳನ್ನು ತಲುಪಲು ದ್ರಾವಿಡ ಭಾಷೆಗಳ ಪೂರ್ವಸ್ಥಿತಿಗಳಿಗೆ ಸಂಬಂಧಿಸಿದ ಸಂಶೋಧನೆ ಮತ್ತು ತೌಲನಿಕ ಅಧ್ಯಯನಗಳು ನಡೆಯಬೇಕು.

ಸಾಹಿತ್ಯಕ ಪಠ್ಯಗಳನ್ನು ಆಧಾರವಾಗಿಟ್ಟುಕೊಂಡು, ಆಡುಮಾತಿನ ಸ್ವರೂಪದ ಬಗ್ಗೆ ತೀರ್ಮಾನಗಳನ್ನು ತಲುಪುವುದು ಸರಿಯಲ್ಲ. ವಾಸ್ತವವಾಗಿ, ಯಾವುದೇ ಕಾಲದ ಸಾಹಿತ್ಯಭಾಷೆಯು ತನ್ನ ಕಾಲದ ಆಡುಮಾತಿನೊಂದಿಗೆ ಯಥಾಯಥಾ ಸಂಬಂಧವನ್ನು ಹೊಂದಿರುವುದಿಲ್ಲ. ಬಹು ಸಂಖ್ಯೆಯಲ್ಲಿರುವ ಉಪಭಾಷೆಗಳನ್ನು ಸಾಹಿತ್ಯವು ಸಮಗ್ರವಾಗಿ ಪ್ರತಿನಿಧಿಸುವ ಮಾತಂತೂ ದೂರವೇ ಉಳಿಯಿತು. ಆದ್ದರಿಂದ, ನಾವು ಸಾಹಿತಿಗಳು ಮಾಡಿಕೊಂಡಿರಬಹುದಾದ ಶೈಲೀಯ ಆಯ್ಕೆಗಳು ಮತ್ತು ಅಂತಹ ಆಯ್ಕೆಗಳ ಹಿಂದಿರುವ ಕಾರಣಗಳನ್ನು ಕುರಿತು ಆಲೋಚಿಸಬೇಕಾಗುತ್ತದೆ. ಸಾಮಾನ್ಯವಾಗಿ, ಸಾಹಿತ್ಯಭಾಷೆಯು ಉಪಭಾಷೆ ಮತ್ತು ಪ್ರಮಾಣಭಾಷೆಗಳ ಸಂಯೋಜನೆ. 'ಕವಿರಾಜಮಾರ್ಗ'ದ ಲೇಖಕನಾದ ಶ್ರೀವಿಜಯನು ತನ್ನ ಕಾಲದಲ್ಲಿ ಪ್ರಚಲಿತವಾಗಿದ್ದ ಅಸಂಖ್ಯ ಉಪಭಾಷೆಗಳನ್ನು ಕುರಿತು ಬೇಸರದ ಧಾಟಿಯಲ್ಲಿಯೇ ಬರೆಯುತ್ತಾನೆ. ಅವುಗಳನ್ನು ಪಟ್ಟಿಮಾಡುವುದು ಸಾವಿರ ಹೆಡೆಗಳಿರುವ ಆದಿಶೇಷನಿಗೂ ಸಾಧ್ಯವಿಲ್ಲವೆಂದು ಉದ್ಗಾರ ತೆಗೆಯುತ್ತಾನೆ. ಅವನ ಕೃತಿಯು ಇಂದಿನ ಕೊಪ್ಪಳ, ಪಟ್ಟದಕಲ್ಲು, ಬಾದಾಮಿ ಮತ್ತು ಮುದಗಲ್ಲುಗಳಿಂದ ಸುತ್ತುವರಿಯಲ್ಪಟ್ಟ ಪ್ರದೇಶದಲ್ಲಿ ಬಳಸುತ್ತಿದ್ದ ಭಾಷೆಯೇ ತಿರುಳುಗನ್ನಡವೆಂದು ಘೋಷಿಸುತ್ತದೆ. ಅವನು ಪ್ರಮಾಣಭಾಷೆಯೊಂದನ್ನು ರೂಪಿಸಲು ಪ್ರಯತ್ನಿಸುತ್ತಾನೆ.

ಯಾವುದೇ ಕಾಲದ ಲೇಖಕಸಮೂಹದ ಅಥವಾ ಒಬ್ಬ ಲೇಖಕನ ಸಾಹಿತ್ಯಕ ಶೈಲಿಯು ಎರಡು ಸಂಗತಿಗಳನ್ನು ಅವಲಂಬಿಸಿರುತ್ತದೆ. ಮೊದಲನೆಯದು, ಲೇಖಕ/ಲೇಖಕರು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಓದುಗರ ಸ್ವರೂಪ. ಎರಡನೆಯದು ಲೇಖಕನು ತನ್ನ ಮನೋಧರ್ಮ ಮತ್ತು ವಸ್ತುವಿಗೆ ಅನುಗುಣವಾಗಿ ಮಾಡಿಕೊಳ್ಳುವ ಶೈಲೀಯ ಆಯ್ಕೆ. ಉದಾಹರಣೆಗೆ ಹತ್ತು ಮತ್ತು ಹನ್ನೊಂದನೆಯ ಶತಮಾನಗಳಲ್ಲಿ ಕಾವ್ಯರಚನೆ ಮಾಡಿದ ಕವಿಗಳ ಶಬ್ದಕೋಶವು ಸಂಸ್ಕೃತವನ್ನು ಧಾರಾಳವಾಗಿ ಬಳಸಿಕೊಳ್ಳುತ್ತಿತ್ತು ಹಾಗೂ ಅವರ ಕಾವ್ಯಗಳು ಛಂಧೋನಯಮಗಳಿಂದ ಬದ್ಧವಾಗಿರುತ್ತಿದ್ದವು. ಈ ಚಂಪೂ ಕಾವ್ಯಗಳು ಬಹುಮಟ್ಟಿಗೆ ರಾಜಾಸ್ಥಾನಗಳ ವಿದ್ವಾಂಸರಿಗೆ, ಅಂತೆಯೇ ಅವುಗಳ ಅಚೆಗಿನ ಅಕ್ಷರಸ್ಥ ಅಲ್ಪಸಂಖ್ಯಾತರಿಗೆ ತಲುಪುತ್ತಿದ್ದವು. ಸಹಜವಾಗಿಯೇ, ಆ ಓದುಗಳಿಗೆ ವಿವರಣಾತ್ಮಕವಾದ ಮಾತುಗಳ ಅಗತ್ಯವಿರಲಿಲ್ಲ. ಒಂದು ಮಾತಿನಲ್ಲಿ ಹೇಳುವುದಾದರೆ, ಕನ್ನಡ ಸಾಹಿತ್ಯವು ತನ್ನ ದೇಸೀತನವನ್ನು ಉಳಿಸಿಕೊಂಡೂ ಮೌಖಿಕ ಪರಂಪರೆಯಿಂದ ದೂರ ಚಲಿಸಿತ್ತು. ಸಾಹಿತ್ಯದ ಭಾಷೆಯು ವಿದ್ವತ್ಪೂರ್ಣವೂ ಅಲಂಕರಿತವೂ ಶೈಲೀಕೃತವೂ ಆಗಿ ಪರಿಣಮಿಸಿತ್ತು. ಹೀಗೆಂದರೆ ಆ ಕೃತಿಗಳ ಸಾಹಿತ್ಯಗುಣವನ್ನು ಅಲ್ಲಗಳೆದಂತೆ ಅಲ್ಲ. ಗದ್ಯ-ಪದ್ಯಗಳ ನಡುವೆ ಉಯ್ಯಾಲೆಯಾಡುವ ಚಂಪೂ ರೂಪವು ಅನೇಕ ಪ್ರಯೋಗಗಳಿಗೆ ಅವಕಾಶ ಮಾಡಿಕೊಡುತ್ತದೆ. ಮಹತ್ವಪೂರ್ಣವಾದ ಕಾವ್ಯವನ್ನು ರಚಿಸುವುದು ಅಥವಾ ನೀರಸವೂ ಪಾಂಡಿತ್ಯದ ಭಾರದಿಂದ ಕುಸಿದ ಕಾವ್ಯವನ್ನು ರಚಿಸುವುದು ಕವಿಯ ವೈಯಕ್ತಿಕ ಪ್ರತಿಭೆಯನ್ನು ಅವಲಂಬಿಸಿತ್ತು. ಪಂಪ ಮತ್ತು ರನ್ನರನ್ನು ಹೋಲಿಸಿನೋಡಿದಾಗ ಈ ಮಾತು ಸ್ಪಷ್ಟವಾಗುತ್ತದೆ. ಸಂಸ್ಕೃತದ ಬಳಕೆಯು ದೀರ್ಘವಾದ ಸಮಾಸಪದಗಳ ಮತ್ತು ಸಂಕೀರ್ಣ ವಾಕ್ಯಗಳ ರಚನೆಗೆ ಅನುವು ಮಾಡಿಕೊಡುತ್ತದೆ. ಕನ್ನಡವೂ ಅನೇಕ ಬಾರಿ ಈ ಒತ್ತಡಗಳಿಗೆ ಮಣಿಯಬೇಕಾಯಿತು.

'ವಡ್ಡಾರಾಧನೆ'ಯು ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ ಮಹತ್ವದ ಕೃತಿ. ಮೊದಲನೆಯದಾಗಿ ಅದು ಗದ್ಯದಲ್ಲಿದೆ. ಎರಡನೆಯದಾಗಿ ಅದರಲ್ಲಿ ಸಂಸ್ಕೃತದ ಬಳಕೆ ಕಡಿಮೆ. ಈ ಕೃತಿಯಲ್ಲಿ ಪ್ರಾಕೃತ ಮತ್ತು ದ್ರಾವಿಡಭಾಷೆಗಳ ಪ್ರಭಾವವನ್ನು ಏಕಕಾಲದಲ್ಲಿ ಗುರುತಿಸಲು ಸಾಧ್ಯ.

ಹನ್ನೆರಡನೆಯ ಶತಮಾನವು ಕನ್ನಡದ ಸಾಹಿತ್ಯಕ ಶೈಲಿಯಲ್ಲಿ ಮಹತ್ವದ ತಿರುಗುಬಿಂದು. ಆ ಕಾಲದಲ್ಲಿ ಜನ ಸಮುದಾಯಗಳ ಆಡುಮಾತಿನಲ್ಲಿಯೇ ಕ್ರಾಂತಿಕಾರಕವಾದ ಬದಲಾವಣೆಯಾಯಿತೆಂದು ಅರ್ಥವಲ್ಲ. ಸಾಹಿತ್ಯರಚನೆಯನ್ನು ತಮ್ಮ ಮೂಲ ಉದ್ದೇಶವಾಗಿ ಹೊಂದಿರದ ಶಿವಶರಣರು, ತಮ್ಮ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕೆಂದು ಬಯಸಿದರು. ಸಹಜವಾಗಿಯೇ, ಅವರ ಶೈಲಿಯು ಶಕ್ತಿಶಾಲಿಯಾದರೂ ಸರಳವಾಗಿತ್ತು. ದೀರ್ಘವಾದ ಕಾವ್ಯಗಳನ್ನು ಸೃಷ್ಟಿಸುವ ಅಗತ್ಯವು ಅವರಿಗೆ ಇರಲೇ ಇಲ್ಲ. ಅವರ ಭಾವಗೀತಾತ್ಮಕವಾದ ಬರವಣಿಗೆಯು, ಕಠಿಣವಾದ ಛಂದೋನಿಯಮಗಳಿಂದ ಬದ್ಧವಾಗಿರಲಿಲ್ಲ. ಸಂಸ್ಕೃತವನ್ನು ಆದಷ್ಟು ಕಡಿಮೆ ಬಳಸಬೇಕು ಎನ್ನುವುದು ಅವರಿಗೆ ಕೇವಲ ಕಾವ್ಯಶೈಲಿಯ ಪ್ರಶ್ನೆಯಾಗಿರಲಿಲ್ಲ. ಅದು ಅವರ ತಾತ್ವಿಕ ಧೋರಣೆಯೂ ಆಗಿತ್ತು. ಜನ ಸಮುದಾಯಗಳನ್ನು ತಲುಪುತ್ತದೆ ಎನ್ನುವ ಕಾರಣದಿಂದಲೇ ಅವರು ನಡುಗನ್ನಡವನ್ನು ಆರಿಸಿಕೊಂಡರು. ಇಲ್ಲಿಯೂ ಕೂಡ ಪ್ರಮಾಣವೆನ್ನಬಹುದಾದ ಸಾಹಿತ್ಯಭಾಷೆಯೊಂದರ ನಿರ್ಮಿತಿ ನಡೆಯಿತು. ಅದು ತನ್ನ ಕಾಲ ಹಾಗೂ ಪ್ರದೇಶಗಳ ಉಪಭಾಷೆಯನ್ನು ಅಷ್ಟಾಗಿ ಬಳಸಿಕೊಂಡಂತೆ ತೋರುವುದಿಲ್ಲ. ಆದ್ದರಿಂದಲೇ, ಹನ್ನೆರಡನೆಯ ಶತಮಾನದ ಕನ್ನಡ ಆಡುಮಾತು ಹೇಗಿರಬಹುದೆಂದು ಊಹಿಸುವುದು ಸುಲಭವಲ್ಲ.

ಈ ವಿಷಯದಲ್ಲಿ, ಹರಿಹರನದು ಮಹತ್ವದ ಹೆಸರು. ಅವನಿಗೆ ಚಂಪೂ ಕಾವ್ಯಕ್ಕೆ ಸಹಜವಾದ ಶೈಲಿ ಮತ್ತು ನಡುಗನ್ನಡಕ್ಕೆ ಸಹಜವಾದ ಆಡುಮಾತಿನ ಶೈಲಿ ಇವೆರಡರ ಮೇಲೂ ಹಿಡಿತವಿತ್ತು. 'ಗಿರಿಜಾಕಲ್ಯಾಣ' ಮತ್ತು 'ಶಿವಗಣದ ರಗಳೆ'ಗಳನ್ನು ಓದಿದಾಗ ಈ ಮಾತು ಸ್ಪಷ್ಟವಾಗುತ್ತದೆ. ಅವನು 'ಗಿರಿಜಾ ಕಲ್ಯಾಣ'ದಲ್ಲಿ ಸಂಸ್ಕೃತಲೇಪಿತವೂ ಶೈಲಿಕೃತವೂ ಆದ ಶೈಲಿಯನ್ನು ಬಳಸಿಕೊಂಡು, ಅನಂತರದ ರಗಳೆಗಳಲ್ಲಿ ಆಡುಮಾತಿನ ನಡುಗನ್ನಡದ ಕಡೆಗೆ ಚಲಿಸುತ್ತಾನೆ. ಅವನ ಮುಖ್ಯವಾದ ರಗಳೆಗಳ ಅಧ್ಯಾಯಗಳು ಗದ್ಯ ಮತ್ತು ಪದ್ಯಗಳನ್ನು ಒಂದರ ನಂತರ ಒಂದರಂತೆ ಬಳಸಿಕೊಳ್ಳುತ್ತವೆ. ಆ ರಗಳೆಗಳಲ್ಲಿ ನಾಟಕೀಯವಾದ, ಸಂಭಾಷಣೆಗೆ ಒತ್ತು ಕೊಡುವ ಅನೇಕ ಭಾಗಗಳಿವೆ. ಸಹಜವಾಗಿಯೇ ಅವು ಆಡುಮಾತಿನ ಕಡೆಗೆ ಚಲಿಸುತ್ತವೆ. ಅದೂ ಅಲ್ಲದೆ ರಗಳೆಗಳಲ್ಲಿ ಬರುವ ಅನೇಕ ಮುಖ್ಯ ಪಾತ್ರಗಳು ಶ್ರಮಿಕ ಸಮುದಾಯಗಳ ಹಿನ್ನೆಲೆಯಿಂದ ಬಂದವರು. ಉಪಭಾಷೆಗಳನ್ನು ಅಲ್ಲದಿದ್ದರೂ ಒರಟಾದ ಗ್ರಾಮೀಣ ಶೈಲಿಯನ್ನು ಬಳಸುವುದು ಅವರಿಗೆ ಅನಿವಾರ್ಯ. ಈ ಪಾತ್ರಗಳು ಚಂಪೂ ಕಾವ್ಯದ ಪಾತ್ರಗಳಿಗಿಂತ ಭಿನ್ನವಾಗಿ ಮಾತನಾಡುತ್ತಾರೆ. ಆದರೆ, ಅವರದು ಉಪಭಾಷೆಯೂ ಅಲ್ಲ. ಹರಿಹರನು ವರ್ಣನೆ, ಸಂಭಾಷಣೆ, ನಿರೂಪಣೆ ಮತ್ತು ಆಲೋಚನೆಗಳೆಂಬ ನಾಲ್ಕು ನೆಲೆಗಳಲ್ಲಿಯೂ ಸಂಸ್ಕೃತದಿಂದ ಆಮದಾಗದ ಶೈಲಿಯನ್ನು ಬಳಸುತ್ತಾನೆ. ಇಂತಹ ಬಳಕೆಯು ಸಾಹಿತ್ಯಕ ಭಾಷೆಯಾಗಿ ಕನ್ನಡದ ಸಾಧ್ಯತೆಗಳನ್ನು ಹೆಚ್ಚಿಸಿತು.ಆದ್ದರಿಂದಲೇ ಹರಿಹರನು ಮುಖ್ಯ. ಇದು ನಿಜವಾದರೂ ಪಂಪ ಮತ್ತು ಅವನ ಕೆಲವು ಸಮಕಾಲೀನರು, ಇದೇ ಸಾಧನೆಯನ್ನು ಸಂಸ್ಕೃತವನ್ನು ಅಗತ್ಯವಿರುವಾಗ ಬಳಸಿಕೊಂಡು ಮಾಡಿದ್ದರೆನ್ನುವುದು ನಿಜ.

ಹರಿಹರನ ನಂತರ ಕನ್ನಡವು ಮತ್ತೆ ಹಿಂದಿರುಗಿ ನೋಡಲಿಲ್ಲ. ಅನಂತರವೂ ಕೆಲವು ಕವಿಗಳು ಚಂಪೂ ಕಾವ್ಯಗಳನ್ನು ಬರೆದರೆನ್ನುವುದು ನಿಜವಾದರೂ ಅವುಗಳ ಓದುಗರು ಅಲ್ಪಸಂಖ್ಯಾತರಾಗಿದ್ದರು. ರಾಘವಾಂಕನು ಷಟ್ಪದಿಯನ್ನು ಉಪಯೋಗಿಸಿ ರಚಿತವಾದ ದೇಸೀ ಕಾವ್ಯದ ಹರಿಕಾರ. ಅವನ 'ಹರಿಶ್ಚಂದ್ರಕಾವ್ಯ' ಮತ್ತು 'ಸಿದ್ದರಾಮಚಾರಿತ್ರ'ದಂತಹ ಕಾವ್ಯಗಳು ಎಲ್ಲ ಕಾಲಕ್ಕೂ ಜನಪ್ರಿಯ ಕೃತಿಗಳು. ಅವನ ಶೈಲಿಯು ಅಲಂಕಾರಗಳ ಕಡೆಗೆ ಹರಿಹರನಿಗಿಂತ ಹೆಚ್ಚಾಗಿ ಒಲಿದಿತ್ತು. ವರ್ಣನಾತ್ಮಕವಾದ ಭಾಗಗಳಲ್ಲಂತೂ ಈ ಮಾತು ಇನ್ನಷ್ಟು ನಿಜ. ಕುಮಾರವ್ಯಾಸನು ಇದೇ ಪರಂಪರೆಯನ್ನು ಮುಂದುವರಿಸಿ ಸಾಕಷ್ಟು ಯಶಸ್ಸನ್ನು ಪಡೆದನು. ಏಕೆಂದರೆ, ಅವನು ಮಹಾಕಾವ್ಯದ ನೆಲೆಗಳನ್ನು ಹೋಂದಿರುವ ಕಾವ್ಯವನ್ನು ಜನಸಾಮಾನ್ಯರಿಗೆ ನಿಕಟವಾದ ಭಾಷೆಯಲ್ಲಿ ಹೇಳುವುದರಲ್ಲಿ ಯಶಸ್ವಿಯಾದನು. ಕುಮಾರವ್ಯಾಸನು ಬಳಸುವ ಕನ್ನಡದ ಫಲವಾಗಿ, ದೂರದ ಉತ್ತರ ಭಾರತದಲ್ಲಿ ನಡೆದಿರಬಹುದಾದ ಮಹಾಭಾರತದ ಕಥೆಯು ಕನ್ನಡದ ತಿಳಿವಳಿಕೆಯ ಭಾಗವಾಯಿತು. ಮರಾಠಿಯ ನಿಕಟ ಪರಿಚಯವಿರುವಂತೆ ತೋರುವ ಕುಮಾರವ್ಯಾಸನು ದ್ವಿಭಾಷಿಕನೇ ಆಗಿರಬೇಕು.

ಪುರಂದರದಾಸ ಮತ್ತು ಕನಕದಾಸರ ನಾಯಕತ್ವದಲ್ಲಿ ರೂಪಿತವಾದ ಹರಿದಾಸ ಪರಂಪರೆಯೂ ಶಿವಶರಣರಂತಹುದೇ ಉದ್ದೇಶಗಳನ್ನು ಹೊಂದಿತ್ತು. ಅವರ ಅನೇಕ ಕೀರ್ತನೆಗಳು ವರ್ಣನೆ ಮತ್ತು ಭಾವಗೀತೆಯ ಗುಣಗಳನ್ನು ಬೆಸೆಯುವುದರಲ್ಲಿ, ಗೆಲುವನ್ನು ಪಡೆದವು.

ಇವೆಲ್ಲದರ ನಡುವೆ ನಾವು ಒಂದು ಸಂಗತಿಯನ್ನು ಮರೆಯಬಾರದು. ಕಾಲದಿಂದ ಕಾಲಕ್ಕೆ ಒಡಮೂಡಿದ ಕಾವ್ಯಶೈಲಿಯು, ಕೆಲವು ಸಮಾನ ನೆಲೆಗಳನ್ನು ಹೊಂದಿದ್ದರೂ ನಮ್ಮ ಮುಖ್ಯ ಕವಿಗಳೆಲ್ಲರೂ ತಮ್ಮದೇ ಆದ ಸ್ವಂತ ಶೈಲಿಯನ್ನು ಕಂಡುಕೊಂಡಿದ್ದಾರೆ. ಉದಾಹರಣೆಗೆ ಪಂಪ ಮತ್ತು ರನ್ನರಿಬ್ಬರೂ ಚಂಪೂ ಕಾವ್ಯಗಳನ್ನೇ ಬರೆದರಾದರೂ ಅವರ ಶೈಲಿಗಳ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಮತ್ತೆ ನೋಡಿದರೆ ಅವರಿಬ್ಬರಿಗೂ ನಾಗವರ್ಮ, ನಾಗಚಂದ್ರರ ಶೈಲಿಗಳಿಗೂ ಬಹಳ ಅಂತರವಿದೆ. ಪ್ರಮುಖ ವಚನಕಾರರಾದ ಬಸವಣ್ಣ, ಅಲ್ಲಮಪ್ರಭು ಮತ್ತು ಅಕ್ಕಮಹಾದೇವಿಯರ ಶೈಲಿಗಳಲ್ಲಿಯೂ ಇಂತಹುದೇ ತನ್ನತನವನ್ನು ಗುರುತಿಸಬಹುದು. ಪ್ರಮುಖ ಷಟ್ಪದಿಕಾರರೂ ಈ ಮಾತಿಗೆ ಅಪವಾದವಲ್ಲ.

ಕ್ರಮೇಣ ನಡುಗನ್ನಡವು ಹೊಸಗನ್ನಡಕ್ಕೆ ಹಾದಿಮಾಡಿಕೊಡುವುದು ನಮ್ಮ ಗಮನಕ್ಕೆ ಬರುತ್ತದೆ. ಈ ಕಾಲದಲ್ಲಿ ಗದ್ಯವನ್ನು ಬೇರೆ ಬೇರೆ ಉದ್ದೇಶಗಳಿಗಾಗಿ ಉಪಯೋಗಿಸಿಕೊಳ್ಳಲಾಯಿತು. ಅನೇಕ ಶಾಸ್ತ್ರಗ್ರಂಥಗಳನ್ನು ಗದ್ಯದಲ್ಲಿ ರಚಿಸುವ ಪರಿಪಾಠ ಮೊದಲಾಯಿತು. ಹೊಸಗನ್ನಡದ ಸಾಹಿತ್ಯಕ ಶೈಲಿಯು ಬೇರೆಯದೇ ಆದ ಪರಿಶೀಲನೆಯನ್ನು ಬಯಸುತ್ತದೆ. ಇಲ್ಲಿ ಅದರ ಅಗತ್ಯವಿಲ್ಲ.

ಇಲ್ಲಿಯೇ ಹೆಸರಿಸಬೇಕಾದ ಮತ್ತೊಂದು ಕವಲು ಎಂದರೆ, ಜನಪದ ಸಾಹಿತ್ಯವು ರೂಪಿಸಿಕೊಂಡ ಸಾಹಿತ್ಯಭಾಷೆಯ ಸ್ವರೂಪ. ಓದು ಬರೆಹವನ್ನು ಕಲಿಯದ ಸಮುದಾಯಗಳ ನಡುವೆ ಹುಟ್ಟಿದ ಈ ಕಾವ್ಯ/ಕವಿತೆಗಳು ಬೇರೆಯದೇ ಆದ ಉಪಾಯಗಳನ್ನು ಕಂಡುಕೊಳ್ಳಬೇಕಾಯಿತು. ಅವರು ಭೌಗೋಳಿಕ ಉಪಭಾಷೆಗಳ, ಗ್ರಾಮೀಣ ನೆಲೆಗಳನ್ನು ಬಳಸುವುದಲ್ಲದೆ, ಗೇಯತೆಯ ನೆರವನ್ನೂ ಪಡೆಯಬೇಕಾಯಿತು. ಅದರಿಂದ ಒಳ್ಳೆಯದೇ ಆಯಿತು. ಇದರಿಂದ ಜನಪದ ಸಾಹಿತ್ಯವು ಇಡಿಯಾದ ಸಮುದಾಯಗಳಿಗೆ, ಹೆಚ್ಚು ಹತ್ತಿರವಾದವು. ಪ್ರತಿಯೊಂದು ಕಾವ್ಯವೂ ತನ್ನತನವನ್ನು ಕಾಪಾಡಿಕೊಂಡಿತು.

ಗಾತ್ರದಲ್ಲಿ ಚಿಕ್ಕದಾದ ಈ ಸಮೀಕ್ಷೆಗೆ, ಈ ವಿಷಯವನ್ನೇ ಕುರಿತ ಇತರ ಅಧ್ಯಯನಗಳು ಪೂರಕವಾಗುತ್ತವೆ.

ಮುಖಪುಟ / ಭಾಷೆ